ಶಿಂಷಾ
 	ಕಾವೇರಿ ನದಿಯ ಒಂದು ಉಪನದಿ. ಇದಕ್ಕೆ ಶಿಂಶುಪಾ, ಕದಂಬ, ಕಡಬಕೊಳ್ಳ ಎಂಬ ಹೆಸರುಗಳೂ ಇವೆ. ಈ ನದಿ ತುಮಕೂರು ಜಿಲ್ಲೆಯಲ್ಲಿ ದೇವರಾಯನದುರ್ಗದ ದಕ್ಷಿಣ ಭಾಗದಲ್ಲಿ ಹುಟ್ಟಿ, ನೈಋತ್ಯದತ್ತ ಸಾಗಿ ತುರುವೇಕೆರೆ ತಾಲ್ಲೂಕನ್ನು ಪ್ರವೇಶಿಸಿ, ಅಲ್ಲಿಂದ ಆಗ್ನೇಯಾಭಿಮುಖವಾಗಿ ಕುಣಿಗಲು ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಹರಿದು, ತರುವಾಯ ದಕ್ಷಿಣಾಭಿಮುಖವಾಗಿ ಪ್ರವಹಿಸಿ ಮದ್ದೂರು ತಾಲ್ಲೂಕಿನ ಕಿರಂಗೂರಿನ ಬಳಿ ಮಂಡ್ಯ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಇದು ಮದ್ದೂರಿನ ಪಕ್ಕದಲ್ಲಿ ಹರಿಯುವುದರಿಂದ ಇದನ್ನು ಮದ್ದೂರು ಹೊಳೆ ಎಂದು ಕರೆಯುತ್ತಾರೆ. ಮದ್ದೂರು ತಾಲ್ಲೂಕನ್ನು ದಾಟಿ ಆಗ್ನೇಯ ದಿಕ್ಕಿನಲ್ಲಿ ಹರಿಯತೊಡಗಿ ಮಳವಳ್ಳಿ ತಾಲ್ಲೂಕನ್ನು ಪ್ರವೇಶಿಸಿ, ಶಿವಸಮುದ್ರ ಜಲಪಾತಕ್ಕಿಂತ ಸ್ವಲ್ಪ ಹಿಂದೆ ಇದು ಕಾವೇರಿ ನದಿಯನ್ನು ಸೇರುತ್ತದೆ. ಶಿಂಷಾ ನದಿಯ ಹರಿವಿನ ಒಟ್ಟು ಉದ್ದ ಸು. 130 ಕಿಮೀ. ತುಮಕೂರು ಜಿಲ್ಲೆಯಲ್ಲಿ ಹರಿಯುವಾಗ ಇದಕ್ಕೆ ಸೇರುವ ನಾಗ ಮತ್ತು ನಾಗಿನಿ ಎಂಬ ತೊರೆಗಳು ಇದರ ಮುಖ್ಯ ಉಪನದಿಗಳು.

	ಶಿಂಷಾ ಚಿಕ್ಕ ನದಿ. ಮಳೆಗಾಲದಲ್ಲಿ ಮಾತ್ರ ಹೆಚ್ಚು ನೀರು ಹರಿಯುತ್ತದೆ. ಈ ನದಿಗೆ ಅಡ್ಡಲಾಗಿ ಕಡಬ ಮತ್ತು ತುರುವೇಕೆರೆಗಳಲ್ಲಿ ದೊಡ್ಡ ಕೆರೆಗಳನ್ನು ನಿರ್ಮಿಸಲಾಗಿದೆ. ಮಾರ್ಕೋನಹಳ್ಳಿಯ ಬಳಿ ದೊಡ್ಡ ಕಟ್ಟೆಯೊಂದನ್ನು ಕಟ್ಟಲಾಗಿದೆ. ಕಾವೇರಿ ನದಿಯೊಡನೆ ಸಂಗಮಿಸುವುದಕ್ಕೆ ಮುಂಚೆ ಇದು ಹರಿಯುವ ಕಣಿವೆಯಲ್ಲಿ ಅಣೆಯೊಂದನ್ನು ಕಟ್ಟಿ ಸಮೀಪದಲ್ಲಿ ಸಣ್ಣ ಪ್ರಮಾಣದ ವಿದ್ಯುತ್ ಉತ್ಪಾದನಾ ಕೇಂದ್ರವೊಂದನ್ನು (ಶಿಂಷಾ ವಿದ್ಯುತ್ ಉತ್ಪಾದನಾ ಕೇಂದ್ರ) ನಿರ್ಮಿಸಲಾಗಿದೆ.	
  (ಪಿ.ಜಿ.ಡಿ.; ಡಿ.ಸಿ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ